ಚನ್ನಪ್ಪ, ಉತ್ತಂಗಿ
1881-1962. ಚನ್ನಪ್ಪ ಉತ್ತಂಗಿಯವರ ಪೂರ್ಣ ಹೆಸರು ರೆವರೆಂಡ್ ಚೆನ್ನಪ್ಪ ದಾನಿ ಯೇಲಪ್ಪ ಉತ್ತಂಗಿ. ಇವರ ಕ್ರೈಸ್ತ ಧರ್ಮದ ಬೋಧಕರಾಗಿದ್ದರು. ಅಸ್ತವ್ಯಸ್ತಗೊಂಡು ತಾರುಮಾರಾಗಿದ್ದ ಸರ್ವಜ್ಞನ ವಚನಗಳನ್ನು ಶಾಸ್ತ್ರೀಯವಾಗಿ ಅಣಿಗೊಳಿಸಿದ, ಅವನ ಸೊಲ್ಲನ್ನು ಕನ್ನಡಿಗರ ಮನೆಮನೆಗೆ ತಲುಪಿಸಿ ಅವನ ಸಮಗ್ರ ದರ್ಶನವನ್ನು ಮಾಡಿಸಿದ ಕೀರ್ತಿ ಇವರದು. ಇವರ ಕಾವ್ಯನಾಮ ತಿರುಳ್ಗನ್ನಡ ತಿರುಕ. ಉದಾರಚರಿತರೂ ವಿದ್ಯೆ ವಿನಯ, ಶೀಲಸಂಪನ್ನರೂ ಆಗಿ ಸಮಕಾಲೀನ ಸಾಹಿತಿಗಳೆಲ್ಲರ ಮೆಚ್ಚುಗೆ ಗಳಿಸಿದ್ದರು. ಕಲ್ಬುರ್ಗಿಯಲ್ಲಿ 1949ರಲ್ಲಿ ನಡೆದ 32ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇವರ ಹಿರಿಯರು ಬಳ್ಳಾರಿ ಜಿಲ್ಲೆಯ ಉತ್ತಂಗಿಯವರು; ಕಾರಣಾಂತರದಿಂದ ವೀರಶೈವ ಧರ್ಮದಿಂದ ಕ್ರೈಸ್ತಧರ್ಮಕ್ಕೆ ಪರವರ್ತನಗೊಂಡು ಕಾಲಕ್ರಮೇಣ ಧಾರವಾಡದಲ್ಲಿ ನೆಲಸಿದರು. ತಮ್ಮ 18ನೆಯ ವಯಸ್ಸಿನಲ್ಲಿ ಚನ್ನಪ್ಪನವರಿಗೆ ಜ್ಞಾನ ವಿಜ್ಞಾನಕ್ಕೆ ಸಂಬಂಧಿಸಿದ ಸಕಲ ವಿಷಯಗಳನ್ನೂ ಸೂಕ್ಷ್ಮವಾಗಿ ಶಾಸ್ತ್ರೀಯವಾಗಿ ಅರಿತುಕೊಳ್ಳಬೇಕೆಂಬ ಹಂಬಲ ಹುಟ್ಟಿತು. ಮಂಗಳೂರಿನ ದೈವಜ್ಞ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು, ಆಲ್ಲಿನ ಅಂಧಶ್ರದ್ಧೆಯ ವ್ಯಾಖ್ಯಾನ ಹಿಡಿಸದೆ ತಮ್ಮದೇ ಆದ ದಾರಿ ಹಿಡಿದರು. ಯಾವ ವಾದವಿವಾದಕ್ಕೂ ಹೋಗದೆ ಸ್ವತಂತ್ರವಾಗಿ ಗ್ರಂಥಾಭ್ಯಾಸ ನಡೆಸಿದರು. ತತ್ತ್ವಶಾಸ್ತ್ರ ಇವರಿಗೆ ಬಹು ಪ್ರಿಯವಾದ ವಿಷಯ. ಇಪ್ಪತ್ತೈದು ವರ್ಷ ಪ್ರಾಚ್ಯ ಹಾಗೂ ಪಾಶ್ಚಾತ್ಯ ತತ್ತ್ವದರ್ಶನಗಳ ವ್ಯಾಸಂಗ ಮಾಡಿದರು. ಅನುಭಾವದ ಆಗರಗಳಾದ ಉಪನಿಷತ್ತು. ಭಗವದ್ಗೀತೆ, ವಚನ ಶಾಸ್ತ್ರಗಳೊಂದಿಗೆ ಪ್ಲೇಟೋ, ಕಾಂಟ್, ಬ್ರಾಡ್ಲೆ, ವಿಲಿಯಮ್ ಜೇಮ್ಸ್ ಮೊದಲಾದವರ ಗ್ರಂಥಗಳನ್ನೂ ಓದಿದರು.

ಚನ್ನಪ್ಪನವರು ಕ್ರೈಸ್ತ ಉಪದೇಶಕರಾಗಿ 1908ರಲ್ಲಿ ಹುಬ್ಬಳ್ಳಿಯಲ್ಲಿ ರೆ. ಕೆ. ಮಾಯರರ ಕೆಳಗೆ ಸೇವೆಯನ್ನು ಆರಂಭಿಸಿ 1908-10 ಹುಬ್ಬಳ್ಳಿಯಲ್ಲಿ ಉಪದೇಶಕ, 1911-12 ಧಾರವಾಡ ವಿದ್ಯಾರ್ಥಿನಿಲಯದ ಮುಖ್ಯಾಧಿಕಾರಿ, 1913-16 ಬೆಟಗೇರಿಯ ಅನಾಥ ಶಾಲೆಯ ಮುಖ್ಯಾಧಿಕಾರಿ, 1917-20 ಮಂಡರಗಿಯಲ್ಲಿ 1920-26 ಧಾರವಾಡದ ಮಿಶನ್ ಶಾಲೆಯಲ್ಲಿ ಬೈಬಲ್ ಶಿಕ್ಷಕ, 1926-33ರಲ್ಲಿ ಹಾವೇರಿ ಮತ್ತು 1933-41ರ ವರೆಗೆ 23 ವರ್ಷಗಳ ಕಾಲ ಬಾಸೆಲ್ ಮಿಶನ್ನಿನ ಸೇವೆ ಸಲ್ಲಿಸಿ 1 ಜನವರಿ 1942ರಲ್ಲಿ ನಿವೃತ್ತರಾದರು.

ಕ್ರೈಸ್ತಧರ್ಮದ ಉಪದೇಶಕರಾಗಿ ಚನ್ನಪ್ಪನವರು ತೋರಿದ ದಾರಿ ವಿಭಿನ್ನವಾದುದು. ತಮ್ಮ ಧರ್ಮವನ್ನು ಬೋಧಿಸುವಾಗ ಇವರು ಇತರ ಧರ್ಮವನ್ನು ಎಂದಿಗೂ ಹಳಿಯಲಿಲ್ಲ. ಶ್ರೇಷ್ಠ ಕ್ರೈಸ್ತಧರ್ಮ ಉಪದೇಶಕರಾಗಿದ್ದಂತೆಯೇ ಇವರು ಶ್ರೇಷ್ಠ ಸಾಹಿತಿ ಹಾಗೂ ಸಂಶೋಧಕರೂ ಆಗಿದ್ದರು. ಇವರು ಕನ್ನಡದ ಸೇವೆಗೆ ದುಮುಕಿದುದು ಒಂದು ಆಕಸ್ಮಿಕ ದೈವಪ್ರೇರಣೆ. ಕನ್ನಡ ಮತ್ತು ಇಂಗ್ಲಿಷಿನಲ್ಲಿ ದೊಡ್ಡ ಪಂಡಿತರಾಗಿದ್ದ ಇವರು ವಿದೇಶೀಯ ರೆವರೆಂಡ್ ಜೆ.ಜೆ. ವುರ್ನರ್ ಅವರಿಗೆ ಕನ್ನಡವನ್ನು ಕಲಿಸುವಾಗ ಸರ್ವಜ್ಞನನ್ನು ಪಾಠ ಹೇಳಬೇಕಾಯಿತು. ಈ ಸಂದರ್ಭದಲ್ಲಿ ವುರ್ನರರಿಗೆ ಎದ್ದ ಸಂದೇಹಗಳು ಮತ್ತು ಬಂಗಾಳೀ ಗೆಳೆಯನೊಬ್ಬ ಹಾಕಿದ ಪ್ರಶ್ನೆಗಳು ಇವರು ಸರ್ವಜ್ಞನನ್ನು ಆಳವಾಗಿ ಆಭ್ಯಸಿಸುವಂತೆ ಮಾಡಿದವು. ಸರ್ವಜ್ಞನ ಸ್ವತಂತ್ರ ವ್ಯಕ್ತಿತ್ವ, ಜೀವನಾನುಭವ, ಸತ್ಯ ಸಾಧನೆಯ ಹೋರಾಟ ಮತ್ತು ಅಭಿವ್ಯಕ್ತಿ ರೀತಿ-ಇವುಗಳಿಂದ ಈ ತಿರುಳ್ಗನ್ನಡ ತಿರುಕ ಮರುಳನಾದ. ಹೀಗೆ 1915ರಲ್ಲಿ ಸಾಹಿತ್ಯಸೇವೆಗೆ ತೊಡಗಿದ ಇವರ ಒಟ್ಟು ಕೃತಿಗಳ ಸಂಖ್ಯೆ 15. ಕನ್ನಡದಲ್ಲಿ 10, ಇಂಗ್ಲಿಷಿನಲ್ಲಿ 5, ಇವರ ಕೃತಿಗಳನ್ನು 2 ವಿಭಾಗ ಮಾಡಬಹುದು. 1 ಕ್ರೈಸ್ತಧರ್ಮಕ್ಕೆ ಸಂಬಂಧಿಸಿದುದು 2 ಕನ್ನಡ ಸಾಹಿತ್ಯ, ಸಂಸ್ಕøತಿ ಹಾಗೂ ಭಾರತೀಯ ಧರ್ಮಗಳಿಗೆ ಸಂಬಂಧಿಸಿದುದು. ಈ ಎಲ್ಲದರ ಘನ ಉದ್ದೇಶ ಸತ್ಯಾರಾಧನೆ.

ಚನ್ನಪ್ಪನವರು ಕನ್ನಡಿಗರಿಗೆ ಅರ್ಪಿಸಿದ ಮೊದಲ ಕೃತಿಯಾದ ಬನಾರಸಕ್ಕೆ ಬೆತ್ಲಹೇಮಿನ ವಿನಂತಿ (1921) ಶಾಸ್ತ್ರೀಯ ದೃಷ್ಟಿಯಿಂದ ಕ್ರಿಸ್ತನ ಜೀವನವನ್ನು ವಿವರಿಸುತ್ತದೆ. ಅದೇ ವರ್ಷ ಹೊರಬಂದ ಇವರ ಹಿಂದೂಸಮಾಜದ ಹಿತಚಿಂತಕ (1921) ಎಂಬುದು ಭಾರತದ ಕುತ್ತಾದ ಜಾತೀಯತೆಯನ್ನು ತೊಡೆದು ಆ ಅಭಿಮಾನವನ್ನು ರಾಷ್ಟ್ರಭಕ್ತಿಯನ್ನಾಗಿ ಉದ್ದೀಪನಗೊಳಿಸುವ ಕೃತಿ. ಮಕ್ಕಳ ಶಿಕ್ಷಣ ಪಟ (1923) ಎಂಬುದು ಹಾವೇರಿಯಲ್ಲಿದ್ದಾಗ ಭಾರತದ ಮಕ್ಕಳ ಶಿಕ್ಷಣದ ಪರಿಪಾಟಲನ್ನು ಕಂಡು, ಕನಿಕರಗೊಂಡು ಅವರ ಬೇಗ ವಿದ್ಯಾವಂತರಾಗಿ ಬಾಳಲೆಂಬ ಹಾರೈಕೆಯ ಪ್ರಯತ್ನದ ಫಲವಾಗಿ ರಚನೆಗೊಂಡದ್ದು.

ಸರ್ವಜ್ಞ ವಚನಗಳು (1924) ಎಂಬ ಇವರ ಸಂಪಾದಿತ ಕೃತಿ ಇವರನ್ನು ಕನ್ನಡದ ಸೇವೆ ಸೆಳೆದು ತಂದುದಲ್ಲದೆ ಇವರಿಗೆ ಸಾಹಿತ್ಯರಂಗದಲ್ಲಿ ಶಾಶ್ವತ ಸ್ಥಾನ ಮತ್ತು ಕೀರ್ತಿಯನ್ನು ಗಳಿಸಿಕೊಟ್ಟಿತು. ಇದರ ಪರಿಷ್ಕರಣಕಾರ್ಯ 1915ರಿಂದ 1924ರವರೆಗೂ ಸಾಗಿತು. 9 ವರ್ಷ ಕಾಲ ಎಲ್ಲ ಎಡರುತೊಡರುಗಳನ್ನು ಮೀರಿ 2000 ವಚನಗಳನ್ನು ಪರಿಷ್ಕರಿಸಿದರು. ತಮ್ಮ 108 ಪುಟಗಳ ಉಪೋದ್ಘಾತದಲ್ಲಿ ಸರ್ವಜ್ಞ ಪೂರ್ವೋತ್ತರ ಸಾಂಗವಾಗಿ ಜನತೆಗೆ ತಿಳಿಯುವ ಹಾಗೆ (1) ಮೂಲ ಪ್ರತಿಗಳ ವಿಚಾರ, (2) ಮುದ್ರಣ ಪ್ರತಿಗಳ ವಿಚಾರ, (3) ಜನ್ಮವಿಚಾರ, (4) ದೇಶವಿಚಾರ, (5) ಕಾಲವಿಚಾರ, (6) ಪದ್ಯಸಂಗ್ರಹ ವಿಚಾರ, (7) ಭಾಷಾವಿಚಾರ, (8) ಸರ್ವಜ್ಞಮೂರ್ತಿ ವಿಚಾರ, (9) ವಚನಸಾರ, (10) ಉಪಸಂಹಾರವೆಂಬ ತಲೆಬರಹಗಳಲ್ಲಿ ಪರಿಶೀಲಿಸಿದ್ದಾರೆ. ಸರ್ವಜ್ಞನ ವಚನಗಳನ್ನು ಪಾರಮಾರ್ಥಿಕ ನೈತಿಕ, ಲೌಕಿಕ ವಿಚಾರಗಳೆಂದು ವಿಭಾಗಿಸಿ ಅಣಿಗೊಳಿಸಿದ್ದಾರೆ. ಚನ್ನಪ್ಪನವರಿಂದ ಈ ಕೃತಿಯ ಸ್ವಾಮ್ಯವನ್ನು ಮೈಸೂರು ಸರ್ಕಾರದವರು ಪಡೆದು ಸಾಹಿತ್ಯ ಮತ್ತು ಸಂಸ್ಕøತಿ ಅಭಿವೃದ್ಧಿ ಯೋಜನೆಯನ್ವಯ ಸುಲಭ ಬೆಲೆಯ ಆವೃತ್ತಿಗಳ ಸರಣಿಯಲ್ಲಿ ಇದನ್ನು ಪ್ರಕಟಿಸಿದ್ದಾರೆ. 18 ಪುಟಗಳ ಲಘು ಟಿಪ್ಪಣಿ 130 ಪುಟಗಳ ವಿಶೇಷ ಟಿಪ್ಪಣಿ ಮತ್ತು ಸರ್ವಜ್ಞನ ವಚನಗಳ ಅಕಾರಾದಿಯನ್ನು ಇದು ಒಳಗೊಂಡಿದೆ. ವಿವಿಧ ವರ್ಗದ ಜನರ ಅಗತ್ಯ, ಅವಶ್ಯಕತೆಗಳನ್ನು ಗಮನಿಸಿ ಪ್ರಕಟಣೆಗೊಂಡ ಏಕೈಕ ಕೃತಿಯಿದು. ಸಾಹಿತ್ಯ ಆವೃತ್ತಿ (1924), ಜೇಬಿನ ಆವೃತ್ತಿ (1935), ಜನಪದ ಆವೃತ್ತಿ (1935), ಅಗ್ಗದ ಆವೃತ್ತಿ (1941) ಹೀಗೆ ನಾಲ್ಕು ಆವೃತ್ತಿಗಳಲ್ಲಿ ಇದು ಪ್ರಕಟಗೊಂಡಿದೆ. ಆರ್. ನರಸಿಂಹಚಾರ್ಯರಿಗೆ ಸಮರ್ಪಿತವಾದ ಈ ಗ್ರಂಥದ ಉಪೋದ್ಘಾತ ಗ್ರಂಥ ಸಂಪಾದಕನ ಹೊಣೆ ಮತ್ತು ವಿಮರ್ಶನ ಸಿದ್ಧಿಯನ್ನು ಸಾರುತ್ತದೆ. ಇವರ ಜೀವಿತದ ಒಂದು ಘಟನೆಯನ್ನು ಒಳಗೊಂಡ ಅವತರಣಿಕೆ ಓದುಗನ ಅನುಕಂಪವನ್ನು ಸಹಜವಾಗಿ ಸೆಳೆಯುವಂತಿದೆ. ಇಲ್ಲಿ ಇವರ ಬರಹದ ದೇಸಿ, ಉಪಮಾ ವೈಖರಿ ಮತ್ತು ತಿಳಿಹಾಸ್ಯದ ಸೊಗಸನ್ನು ಕಾಣಬಹುದು.

ಚನ್ನಪ್ಪನವರು ಹಾವೇರಿಯಲ್ಲಿ ರಚಿಸಿದ ನಾರಾಯಣ ವಾಮನ ಟಿಳಕರ ಜೀವನ ಚರಿತ್ರೆ (1927) ಜೆ.ಸಿ. ವಿನ್ಸೊ ಅವರ ಇಂಗ್ಲಿಷ್ ಕೃತಿಯ ಅನುವಾದ. ತಮ್ಮ ಪತ್ನಿಗೆ ಅರ್ಪಿಸಿದ ಈ ಕೃತಿ ಮಹಾರಾಷ್ಟ್ರದ ಪ್ರಸಿದ್ಧ ಕವಿ, ಭಾರತೀಯ ಕ್ರೈಸ್ತ ಹಾಗೂ ಉಜ್ವಲ ದೇಶಾಭಿಮಾನಿಯೊಬ್ಬನ ಜೀವನ ಚರಿತ್ರೆ. ಭಾರತೀಯರು ಕ್ರೈಸ್ತರಾದಾಕ್ಷಣ ಅವರ ನಿಷ್ಠೆ ಅನ್ಯರಾಷ್ಟ್ರದ್ದಾಗಿರಬಾರದೆಂಬ ಉದ್ದೇಶದಿಂದ ಬಂದು ಸ್ವಾತಂತ್ರ್ಯ ಆಂದೋಲನದ ಸಮಯದಲ್ಲಿ ಭಾರತೀಯರ ಕಣ್ಣುತೆರೆಸಿ ಉಜ್ವಲ ರಾಷ್ಟ್ರಾಭಿಮಾನವನ್ನು ಮೆರೆಯುವಂತೆ ಮಾಡಿದ ಸಾಮಯಿಕ ಕೃತಿ. ಬಸವೇಶ್ವರನೂ ಅಸ್ಪ್ಯಶ್ಯರ ಉದ್ಧಾರವೂ (1933) ಎಂಬ ಕೃತಿ ಮಹಾತ್ಮ ಗಾಂಧಿಯವರಿಗೆ ಅರ್ಪಿಸಲ್ಪಟ್ಟಿದೆ. ಭಾರತದ ಉದ್ಧಾರಕ್ಕೆ ಅಸ್ಪøಶ್ಯತಾ ನಿವಾರಣೆ ದಾರಿಯೆಂದೂ ಸಮಯ ಸಾಧಕರು ಈ ಬಗ್ಗೆ ವೇದಿಕೆಗಳ ಮೇಲೆ ಉಜ್ವಲ ಭಾಷಣ ಮಾಡಿ ಆಚರಣೆಗೆ ತರದಿರುವುದನ್ನು ಎತ್ತಿ ತೋರಿಸಿ ಬಸವಣ್ಣನವರು ನಡೆಸಿದ ಅಸ್ಪøಶ್ಯೋದ್ಧಾರ ಮತ್ತು ಅದರ ಆಚರಣೆಯ ಆವಶ್ಯಕತೆಯನ್ನು ಇದು ತಿಳಿಸುತ್ತದೆ. ಸಾಧು ಸುಂದರಸಿಂಗರ ಅನುಭವಸಾರ ಇಲ್ಲವೆ ದೃಷ್ಟಾಂತದರ್ಪಣ (1939) ಭಾರತದ ಪಾಲ್ ಎಂದು ಪ್ರಸಿದ್ಧರಾದ ಸುಂದರಸಿಂಗರ ಬಗ್ಗೆ ಪ್ರತಿ ಬುಧವಾರ ಹುಬ್ಬಳ್ಳಿಯಲ್ಲಿ ಒಂದು ವರ್ಷಕಾಲ ನೀಡಿದ ಉಪದೇಶ ಭಾಷಣದ ಸಾರ. ಸುಂದರಸಿಂಗರ ಬಗ್ಗೆ ಬಂದಿದ್ದ 13 ಪುಸ್ತಕಗಳನ್ನು ಪರಿಶೀಲಿಸಿ 500 ದೃಷ್ಟಾಂತಗಳನ್ನು ಸಂಗ್ರಹಿಸಿ 12 ಅಧ್ಯಾಯಗಳಲ್ಲಿ ಇಲ್ಲಿ ಅಳವಡಿಸಲಾಗಿದೆ.

ಮೋಳಿಗೆಯ ಮಾರಯ್ಯ ಮತ್ತು ರಾಣಿ ಮಹಾದೇವಿಯವರ ವಚನಗಳು (1950) ಆದಯ್ಯನ ವಚನಗಳು, ಸಿದ್ಧರಾಮ ಸಾಹಿತ್ಯ ಸಂಗ್ರಹಗಳು ಇವರು ಸಂಗ್ರಹಿಸಿ, ಸಂಪಾದಿಸಿ, ದೀರ್ಘ ಉಪೋದ್ಘಾತ ಮತ್ತು ವಿಮರ್ಶೆಗಳೊಂದಿಗೆ ಪ್ರಕಟಿಸಿದ ಕೃತಿಗಳು.
ಮೃತ್ಯುಂಜಯ ಎಂಬುದು ಚನ್ನಪ್ಪನವರ ಕಡೆಯ ಕೃತಿ. ಹಲವು ಮಿತ್ರರ ಸಾಹಸದ ಫಲವಾಗಿ ಜನವರಿ 1962 ರಿಂದ ಆಗಸ್ಟ್ 1962ರ ಅವಧಿಯಲ್ಲಿ ರೂಪುಗೊಂಡದ್ದು. ತಮ್ಮ 18ನೆಯ ವರ್ಷದಿಂದ 60ನೆಯ ವರ್ಷದವರೆಗೆ ತಾವು ಅರಿಯಲು ಪ್ರಯತ್ನಿಸಿದ ಕ್ರಿಸ್ತನ ಜೀವನ ರಹಸ್ಯವನ್ನು ಇದು ತಿಳಿಸುತ್ತದೆ. ಇದರಲ್ಲಿ ಕ್ರಿಸ್ತನ ಕೊನೆಯ ದಿನಗಳ ವಿಸ್ತøತ ವರ್ಣನೆಯಿದೆ. ಕ್ರಿಸ್ತ ಮರಣವನ್ನು ಗೆದ್ದು ಮೃತ್ಯುಂಜಯನಾಗಿ ವಿಜೃಂಭಿಸಿದ ಕಥೆ ಇದರ ವಸ್ತು.

ಚನ್ನಪ್ಪನವರು 5 ಕೃತಿಗಳನ್ನು ಇಂಗ್ಲಿಷಿನಲ್ಲಿ ರಚಿಸಿದ್ದಾರೆ. ಕಂಪ್ಲೀಟ್ ಕನ್ ಕಾರ್ಡೆನ್ಸ್ ಟು ದಿ ಭಗವದ್ಗೀತ ಎಂಬುದು ಎಚ್. ಜಿ. ಬೆಂಗೇರಿಯವರೊಡನೆ ಸಿದ್ಧಗೊಂಡದ್ದು. ಇಲ್ಲಿ ಭಗವದ್ಗೀತೆಯ ವಿಶ್ಲೇಷಾತ್ಮಕ ಮತ್ತು ಸಂಯೋಜನಾತ್ಮಕ ವಿವೇಚನೆಯಿದೆ. ಜಗತ್ತಿನ ಹಲವು ಭಾಷೆಗಳಿಗೆ ಅನುವಾದವಾಗಬಹುದಿದ್ದ ಈ ಕೃತಿ ಪ್ರಕಟವಾಗಿಲ್ಲ. ಲಿಂಗಾಯಿತಿಸಮ್-ಎ ಫೆಯ್ತ್, ಫಿಲಾಸಫಿ ಅಂಡ್ ರಿಲಿಜನ್ ಎಂಬುದು ಆ ವಿಷಯವನ್ನು ವಿವರವಾಗಿ ತಿಳಿಸುತ್ತದೆ. ಬಸವ ಅಂಡ್ ಅನುಭವ ಮಂಟಪ (1932) ಎಂಬ ಕೃತಿ ಆಲೂರ ವೆಂಕಟರಾಯರ ಅನುಭವ ಮಂಟಪದ ಐತಿಹಾಸಿಕತೆಯೆಂಬುದರ ಅನುವಾದವಾಗಿದೆ. ಅನುಭವ ಮಂಟಪದ ಆಸ್ತಿತ್ವದ ಬಗ್ಗೆ ಎದ್ದ ವಾದವಿವಾದಗಳನ್ನಿಲ್ಲಿ ಪರಿಶೀಲಿಸಲಾಗಿದೆ. ವಂಡರ್ ಪುಲ್ ಚೈಲ್ಡ್ ಆಫ್ ಗಾಡ್ ಎಂಬ ಕೃತಿಯಲ್ಲಿ ಪ್ರೇಮ, ತ್ಯಾಗ ಬೇರೆಬೇರೆಯೆಂದು ಕಂಡರೂ ಒಂದೇ ಸಂಗತಿಯ ಎರಡು ಮುಖವೆಂದೂ ಸೃಷ್ಟಿ, ಬೈಬಲ್ ಮತ್ತು ಕ್ರಿಸ್ತನ ಜೀವನ ಒಂದೇ ತಳಹದಿಯ ಮೇಲೆ ನಿಂತಿದೆಯೆಂದೂ ತಿಳಿಸಲಾಗಿದೆ. ಎಲ್ಲಮ್ಮ, ಎ ಗಾಡೆಸ್ ಆಫ್ ಸೌತ್ ಇಂಡಿಯ ಎಂಬ ಪುಸ್ತಕದಲ್ಲಿ ಎಲ್ಲಮ್ಮನ ಗುಡಿ, ಅದರ ಆಡಳಿತ, ಸಂಸ್ಕøತ ಸಾಹಿತ್ಯದಲ್ಲಿ ರೇಣುಕ (ಎಲ್ಲಮ್ಮ), ಜನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಎಲ್ಲಮ್ಮ, ಎಲ್ಲಮ್ಮನನ್ನು ಕುರಿತ ದಂತಕಥೆ ಮತ್ತು ಅದರ ವಿವರಣೆ, ಎಲ್ಲಮ್ಮ ಮತ್ತು ಎಲ್ಲಮ್ಮನ ಭಕ್ತರ ಬಗ್ಗೆ ಸಂಗ್ರಹಿಸಿದ ಕತೆಗಳು ಮತ್ತು ಆಕೆಯ ಪೂಜೆಪುರಸ್ಕಾರಗಳ ಬಗ್ಗೆ ಇರುವ ರೂಢಿ ಹಾಗೂ ಪದ್ಧತಿಗಳನ್ನು ಸಾಂಗವಾಗಿ ವಿವರಿಸಲಾಗಿದೆ.

ಹೀಗೆ ಹಲವು ಮುಖವಾಗಿ ಕ್ರೈಸ್ತಧರ್ಮ, ರಾಷ್ಟ್ರ ಮತ್ತು ಸಾಹಿತ್ಯಗಳ ಸೇವೆಯನ್ನು ಸುಮಾರು 65 ವರ್ಷಗಳ ಕಾಲ ನಡೆಸಿದ ಚನ್ನಪ್ಪನವರು ತಮ್ಮ 81ನೆಯ ವಯಸ್ಸಿನಲ್ಲಿ ಧಾರವಾಡದಲ್ಲಿ ನಿಧನರಾದರು.
(ಜಿ.ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ